ಶಾಂತಾರಾವ್

	ಕರ್ನಾಟಕದಿಂದ ನೃತ್ಯಕಲೆಯಲ್ಲಿ “ಪದ್ಮಶ್ರೀ” ಪ್ರಶಸ್ತಿಯನ್ನು ಗಳಿಸಿಕೊಂಡಿರುವ ಏಕೈಕ ಕಲಾವಿದೆ ಎಂಬ ಕೀರ್ತಿ ಶಾಂತಾರಾವ್‍ರಿಗೆ ಸಲ್ಲುತ್ತದೆ. ಬಹುಮುಖ ಪ್ರತಿಭೆಯ ಶಾಂತ ಹುಟ್ಟು ಕಲಾವಿದೆ. ಪ್ರಚಾರದಲ್ಲಿ ಈಕೆ ಒಬ್ಬ ಶ್ರೇಷ್ಟ ನರ್ತಕಿ ಎಂದು ಗುರುತಿಸಲಾಗಿದ್ದರೂ ಶಾಂತಾ ಕವಿತೆ ಮತ್ತು ಚಿತ್ರಕಲೆಯಲ್ಲೂ ಅಷ್ಟೇ ಪರಿಣತೆ ಎಂಬುದು ಅನೇಕರಿಗೆ ತಿಳಿಯದು. ಆಕೆಯ ಆಂಗ್ಲಭಾಷೆಯಲ್ಲಿನ ಕವಿತೆಗಳು ಮತ್ತು ಅಜಂತಾ ಶೈಲಿಯನ್ನು ಹೋಲುವ ಶ್ರೀಲಂಕಾದ ಸಿಗ್ಗರಿಯಾ ಚಿತ್ರಗಳು ಹಲವಾರು ರಸಿಕರ, ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿವೆ. ಅವುಗಳನ್ನು ಪ್ರಚಾರಗೊಳಿಸಲು ಶಾಂತಾ ಇಷ್ಟಪಡದಿದ್ದರೂ, ಆಕೆಯ ಸಿಗ್ಗರಿಯಾ ಚಿತ್ರಗಳು ಕೆಲವು ಹೆಸರಾಂತ ಪಾಶ್ಚಾತ್ಯ ಸಂಗ್ರಹಕಾರದಲ್ಲಿ ಕಾಣಬಹುದು ಎಂಬುದಂತೂ ನಿಜ. ಆ ವಿಶಿಷ್ಟ ಶೈಲಿಯನ್ನು ಅಭ್ಯಾಸ ಮಾಡುವ ಕಲಾವಿದರೂ ಇಂದು ವಿರಳ. ಅದರಲ್ಲೂ ಶಾಂತಾ ಬಳಸುವ ದೊಡ್ಡ ಅಳತೆಯ ಚಿತ್ರಣ ಮತ್ತೂ ಅಪರೂಪ.

	ಆದರೆ ಶಾಂತಾರಿಗೆ ಕೀರ್ತಿ ಗಳಿಸಿಕೊಟ್ಟಿರುವುದು ಆಕೆಯ ನೃತ್ಯ. ಆಕೆ ಗುರುತಿಸಿಕೊಂಡಿರುವುದು ಮತ್ತು ಆಕೆಗೆ ಹೆಚ್ಚು ಪ್ರಿಯವಾದುದು ಭರತನಾಟ್ಯವಾದರೂ, ಅದರ ಸೋದರ ಶೈಲಿಗಳಾದ ಕಥಕಳಿ ಮತ್ತು ಮೋಹಿನಿ ಆಟ್ಟಂಗಳಲ್ಲೂ ಆಕೆ ಪ್ರಾವೀಣ್ಯತೆಯನ್ನು ಗಳಿಸಿಕೊಂಡಿದ್ದಾರೆ. ಅಲ್ಲದೇ ಶ್ರೀಲಂಕಾದ ವಿಶಿಷ್ಟ “ಕಾಂಡಿಯನ್” ನೃತ್ಯದ ಶೈಲಿಯನ್ನೂ ಕರಗತ ಮಾಡಿಕೊಂಡಿದ್ದಾರೆ. ಇದಲ್ಲದೇ ಭಾಮಾ ಸೂತ್ರಗಳನ್ನು ಆಧರಿಸಿ ತಾವೇ “ಭಾಮನೃತ್ಯ” ಎಂಬ ಪ್ರತ್ಯೇಕ ಶೈಲಿಯನ್ನು ಸೃಷ್ಟಿಸಿರುವ ಕೀರ್ತಿಗೆ ಭಾಜನರು ಶಾಂತ.

	ಮಂಗಳೂರಿಗೆ ಸೇರಿದವರಾದರೂ ವ್ಯವಹಾರದ ದೃಷ್ಟಿಯಿಂದ ತಂದೆಯವರು ಮುಂಬಯಿನಲ್ಲೇ ನೆಲೆಸಿದ್ದರಿಂದ ಶಾಂತಾ ಅವರ ಬಾಲ್ಯ, ಬೆಳವಣಿಗೆ ಎಲ್ಲಾ ಆ ನಗರದಲ್ಲೇ ಕಳೆಯಿತು. ಆ ಸಂದರ್ಭದಲ್ಲಿ, ಎಂದರೆ ಕಳೆದ ಶತಮಾನದ ಮೂವತ್ತರ ದಶಕದಲ್ಲಿ ದೇಶದ ಸ್ವತಂತ್ರ ಚಳವಳಿ ಭರದಿಂದ ಸಾಗಿತ್ತು. ಶಾಂತಾರ ತಂದೆ ಯಾವುದೇ ಸಕ್ರಿಯ ಪಾತ್ರವಹಿಸದಿದ್ದರೂ, ಸ್ವಾಭಾವಿಕವಾಗಿಯೇ ಅದರಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಇದರಿಂದ ಅಂದಿನ ಮುಂದಾಳುಗಳಾದ ಹರೀಂದ್ರನಾಥ ಚಟ್ಟೋಪಾಧ್ಯಾಯ, ಅವರ ಪತ್ನಿ ಕಮಲಾದೇವಿ, ಆತನ ಸಹೋದರಿ ಸರೋಜಿನಿನಾಯಿಡು, ಹೆಸರಾಂತ ಕವಿ ವಿಮರ್ಶಕ ಜಿ. ವೆಂಕಟಾಚಲಂ ಮುಂತಾದವರೆಲ್ಲ ಇವರಲ್ಲಿಗೆ ಭೇಟಿ ಇತ್ತು ಚಳವಳಿಯ ಆಗುಹೋಗುಗಳನ್ನು ಚರ್ಚಿಸುತ್ತಿದ್ದರು.  6-7ರ ಹರೆಯದ ಶಾಂತಾ ಮರೆಯಿಂದ ಆ ಚರ್ಚೆಗಳನ್ನು ಕೇಳುತ್ತಿದ್ದು. ಆಕೆಯ ಕುತೂಹಲವನ್ನು ಕೆರಳಿಸುತ್ತಿತ್ತು. ಸಹಜವಾಗಿಯೇ ಆ ಹಿರಿಯರು ಆಗಾಗ ಬಾಲಕಿ ಶಾಂತಾಳನ್ನು ಮುದ್ದಿಸಿ, ಮಾತನಾಡಿಸುವುದೂ ವಾಡಿಕೆಯಾಗಿತ್ತು. ಶಾಂತಾಳ ಮೋಹಕ ನೋಟ, ಚುರುಕಿನ ಮಾತು, ಮತ್ತು ಗಂಭೀರ ಪ್ರವೃತ್ತಿ ಅವರುಗಳ ಗಮನವನ್ನು ಸೆಳೆದದ್ದು ಸ್ವಾಭಾವಿಕವೇ. ಅಂತೆಯೇ ಕವಿ ಹರೀಂದ್ರರು ಮಾತಿನ ಮಧ್ಯೆ ರಚಿಸಿ ಪಠಿಸುತ್ತಿದ್ದ ಕವನಗಳು, ಸರೋಜಿನಿ ತಮ್ಮ ಮಧುರ ಕಂಠದಲ್ಲಿ ಧ್ವನಿಸುತ್ತಿದ್ದ ಗೀತೆಗಳು ಮತ್ತು ಕಮಲಾದೇವಿಯವರು ಕೊಂಕಣಿ ಭಾಷೆಯಲ್ಲಿ ತಮ್ಮೊಂದಿಗೆ ಪ್ರೀತಿಯಿಂದ ನಡೆಸುತ್ತಿದ್ದ ಸಂಭಾಷಣೆ ಆಕೆಯ ಮರೆಯಲಾಗದ ನೆನಪುಗಳು. ಹರೀಂದ್ರರ ಕವನಗಳಂತೂ ಆಕೆಗೆ ಬಾಯಿ ಪಾಠವಾಗಿತ್ತು.

	ಇಂತಹ ಮುಕ್ತ ವಾತಾವರಣದಲ್ಲಿ ಬೆಳೆದ ಶಾಂತಾರಿಗೆ ಶಾಲೆಯಲ್ಲಿ ಕಲಿಯಲು ಮನಸ್ಸಾಗದಿದ್ದುದು ಆಶ್ಚರ್ಯವೇನಲ್ಲ. ಬದಲು ಆಕೆಯ ಒಲವೆಲ್ಲಾ ಸಂಗೀತ, ನೃತ್ಯ, ಚಿತ್ರ, ಬಿಡಿಸುವಲ್ಲೇ ಕೇಂದ್ರೀಕೃತ. ಯಾವಾಗಲೂ ಯಾವುದೋ ಹಾಡನ್ನು ಗುನುಗುತ್ತಾ, ಕುಣಿಯುತ್ತಾ ಇರುವುದೇ ಆಕೆಯ ಪರಿಪಾಠ, ಇದನ್ನು ಗಮನಿಸಿದ ಆಕೆಯ ತಂದೆಯವರ ಹಿತೈಷಿಗಳಾದ ಹರೀಂದ್ರನಾಥ ಮತ್ತು ಕೆ.ಜಿ. ವೆಂಕಟಾಚಲಂ ಸಹ ಶಾಂತಾಳಿಗೆ ನೃತ್ಯವನ್ನು ಕಲಿಸುವಂತೆ ಸಲಹೆ ಇತ್ತರು. ಶಾಂತಾಳ ಇಚ್ಛೆಯೂ ಅದೇ ಆದುದರಿಂದ ಆಕೆಯ ತಂದೆ, ತಾಯಿಗಳೂ ಆ ಸಲಹೆಗೆ ಮಣಿಯಬೇಕಾಯಿತು. ಶಾಲೆಗೆ ಬದಲು ಶಾಂತಾ ತನಗೆ ಅತ್ಯಂತ ಪ್ರಿಯವಾದ ನೃತ್ಯವನ್ನು ಕಲಿಯುವಂತಾದಳು.

	ಆಶ್ಚರ್ಯವೆಂದರೆ ಶಾಂತಾ ನೃತ್ಯ ಕ್ಷೇತ್ರವನ್ನು ಪ್ರವೇಶಿಸಿದ್ದು ಇಂದು ಆಕೆಗೆ ಕೀರ್ತಿ ತಂದುಕೊಟ್ಟಿರುವ ಭರತನಾಟ್ಯದ ಮೂಲವಲ್ಲ. ಬದಲಾಗಿ, ಸಾಧಾರಣವಾಗಿ ಪುರುಷರೇ ಅಭ್ಯಾಸ ಮಾಡುವ ಕಥಕಳಿ. ಈ ವಿಶಿಷ್ಟ ನಾಟ್ಯಶೈಲಿಯನ್ನು ಕಲಿತ ಪ್ರಪ್ರಥಮ ಮಹಿಳೆ ಶಾಂತಾ ಎಂದರೂ ತಪ್ಪಾಗಲಾರದು. ಕೇರಳ ಕಲಾಮಂದಿರ ನಿರ್ದೇಶಕ ಕವಿ ವಲ್ಲತೋಳ್‍ರ ಮೇಲ್ವಿಚಾರಣೆಯಲ್ಲಿ ಶಾಂತ ತನ್ನ ಅಭ್ಯಾಸವನ್ನು ಹಿರಿಯ ಗುರು ರಾವುನ್ನಿ ಮೆನನ್ನರಲ್ಲಿ ತೊಡಗಿದರು. ಪ್ರಾರಂಭದಲ್ಲೇ ಆಕೆಯ ಸುಲಭವಾದ ಗೃಹಿಕೆ, ನಿಲುವಿನಲ್ಲಿನ ಗಾಂಭೀರ್ಯ ಮತ್ತು ತಾಳ-ಲಯಗಳ ವಿತರಣೆಯಲ್ಲಿ ಕಂಡುಬಂದ ನಿಖರತೆ ವಲ್ಲತೋಳ್‍ರನ್ನು ಆಶ್ಚರ್ಯಗೊಳಿಸಿತು. ಇದರಿಂದ ಪ್ರಭಾವಿತರಾಗಿ ಅವರು ಮತ್ತು ರಾವುನ್ನಿ ಇಬ್ಬರೂ ಹೆಚ್ಚು ಉತ್ಸಾಹದಿಂದ ತ್ವರಿತಗತಿಯಲ್ಲಿ ಪಾಠಗಳನ್ನು ಮುಂದುವರಿಸಿದರು. ಸವಾಲೆನಿಸುವ “ಅಷ್ಟಕಲಶಂ”, ವೈವಿಧ್ಯಮಯ ”ತೋಡಯಂ” ಗಳಲ್ಲಾದೇ ಪುರುಷರಿಗೇ ಮೀಸಲಾದ “ದುಶ್ಯಾಶನ ವಧೆ” ಮತ್ತು ಆಕೆಗೆಂದೇ ವಲ್ಲತೋಳ್‍ರಿಂದ ಸಂಯೋಜಿಸಲಾದ “ತಾಂಡವ” ಗಳನ್ನು ಕರಗತ ಮಾಡಿಕೊಂಡರು. ಯೋಗಾ-ಯೋಗವೆಂಬಂತೆ ಅದೇ ಸಮಯದಲ್ಲಿ ಮೋಹಿನಿ ಆಟಂನಲ್ಲಿ ಅದ್ವಿತೀಯರೆನಿಸಿದ ಕೃಷ್ಣಂ ಪಾಣಿಕ್ಕರ್ ಕಲಾಮಂಡಲಂನಲ್ಲಿ ಉಪಸ್ಥಿತರಿದ್ದುದರಿಂದ ಅವರಲ್ಲಿ ಆ ಲಾವಣ್ಯಮಯ ಶೈಲಿಯನ್ನು ಶಾಂತ ಅಭ್ಯಾಸ ಮಾಡಿದರು. ಪಾಣಿಕ್ಕರರ ಪ್ರಿಯ ಶಿಷ್ಯೆಯಾಗಿ ಅವರ ಮೆಚ್ಚುಗೆಗೆ ಪಾತ್ರರಾದರು. ಹೀಗೆ 2-3 ವರುಷಗಳ ಸತತ ಸಾಧನೆಯ ನಂತರ 1942ರಲ್ಲಿ ತ್ರಿಚೂರ್‍ನಲ್ಲಿ ತಮ್ಮ ರಂಗಪ್ರವೇಶವನ್ನು ಆಚರಿಸಿ, ಗುರುಹಿರಿಯರ ಮೆಚ್ಚುಗೆ ಗಳಿಸಿದರು. ಆ ಸಂದರ್ಭದಲ್ಲಿ ದೊರೆತ ಅವಕಾಶದಿಂದ ಶ್ರೀಲಂಕಾಗೆ ಭೇಟಿಯಿತ್ತು. ಅಲ್ಲಿನ ರಸಿಕರಿಂದಲೂ ಮೆಚ್ಚುಗೆ ಗಳಿಸಿದರು. ಅದೇ ಸಂದರ್ಭದಲ್ಲಿ ಕಾಂಡಿಯನ್ ಶೈಲಿಯ ಹಿರಿಯ ಗುರು ಗುನ್ನಯ್ಯರಿಂದ ಆ ಸಂಪ್ರದಾಯರ ನೃತ್ಯದಲ್ಲಿ ಪರಿಣತಿ ಗಳಿಸಿ ಭಾರತಕ್ಕೆ ವಾಪಸಾದರು.

	ಹೀಗೆ ಶಾಂತಾಳಿಗೆ ನೃತ್ಯದೇವತೆ ಒಲಿದು ಬಂದಿದ್ದರೂ, ಆಕೆಗೆ ಅತ್ಯಂತ ಪ್ರಿಯವಾದ ಭರತನಾಟ್ಯದ ಪ್ರವೇಶ ದೊರಕಿರಲಿಲ್ಲ. ಅದನ್ನು ಅರಸಿ ಆಕೆ, ಆ ಶೈಲಿಯ ಹಿರಿಯ ಗುರು ಮೀನಾಕ್ಷಿ ಸುಂದರಂ ಪಿಳ್ಳೆಯವರನ್ನು ಸಂಪರ್ಕಿಸಿದರು. ತಂಜಾವೂರು ಸಮೀಪದ ಅವರ ವಾಸಸ್ಥಳವಾದ ಪಂದನಲ್ಲೂರಿನಲ್ಲಿ ಈ ಭೇಟಿ ಜರುಗಿತು.

	ಶಾಂತಾರ ಸಾಧನೆಯನ್ನು ಕೇಳಿ, ಆಕೆಯ ಶ್ರದ್ಧೆಯನ್ನು ಗ್ರಹಿಸಿ, ಆ ಹೆಸರಾಂತ, ಪ್ರತಿಷ್ಠಿತ ನೃತ್ಯ ಪರಂಪರೆಯ ಪ್ರತಿಪಾದಕರಾದ ಮೀನಾಕ್ಷಿ ಸುಂದರಂ ಪಿಳ್ಳೆಯರವರು ಪ್ರಸನ್ನಗೊಂಡು ಮುಕ್ತ ಮನಸ್ಸಿನಿಂದ ಭರತನಾಟ್ಯದ ನೃತ್ತ, ನೃತ್ಯಗಳ ಸೂಕ್ಷ್ಮತೆಗಳನ್ನು ವಿವರಿಸಿ. ಆ ಶೈಲಿಯಲ್ಲಿ ಶಾಂತ ಪಾಂಡಿತ್ಯವನ್ನು ಪಡೆಯಲು ನೆರೆವಾದರು. ಭಾಷೆಯ ಅರಿವಿರದೆ ದೂರದಿಂದ ಬಂದ ಆ ಶಿಷ್ಯೆಗೆ ತಮ್ಮ ಮನೆಯಲ್ಲಿಯೇ ವಾಸಿಸಲು ಏರ್ಪಾಡುಮಾಡಿ, ತಮ್ಮ ಒಬ್ಬ ಮಗಳನ್ನು ಆಕೆಯ ಯೋಗಕ್ಷೇಮವನ್ನು ಗಮನಿಸುವಂತೆ ನಿಯೋಜಿಸಿ, ಗುರು-ಕುಲೋಪಾದಿಯಲ್ಲಿ ಪಾಠಾಂತರವನ್ನು ಒದಗಿಸಿ ಕೊಟ್ಟರು. ಶಾಂತಾರೇ ಹೇಳುವಂತೆ, ದೀರ್ಘಕಾಲದ ಆ ಅವಧಿ ತಮ್ಮ ಜೀವನದಲ್ಲೇ ಮರೆಯಲಾಗದ ಅನುಭವ. ಅದರಿಂದ ಗುರು-ಶಿಷ್ಯರಿಬ್ಬರ ಕೀರ್ತಿಯೂ ಬೆಳಗಿತು ಎಂಬುದು ಒಂದು ವಿಶೇಷ.

	ಮುಂದೆ, ಶಾಂತಾರ ಭರತನಾಟ್ಯ ರಂಗಪ್ರವೇಶ, ಮದರಾಸಿನ ಮ್ಯೂಸಿಯಂ ಥಿಯೇಟರ್‍ನಲ್ಲಿ 1994ರ ಸುಮಾರಿನಲ್ಲಿ ಜರುಗಿ ರಸಿಕರ, ವಿದ್ವಾಂಸರ, ವಿಮರ್ಶಕರ ಮನ್ನಣೆ ಗಳಿಸಿತು. ಅಂದಿನಿಂದ ಮುಂದುವರೆದ ಶಾಂತಾರ ಪ್ರದರ್ಶನಗಳು ದೇಶ-ವಿದೇಶಗಳಲ್ಲಿ ಜರುಗಿ ಪ್ರಶಂಸೆಗೆ ಪಾತ್ರವಾಗಿದೆ. ಆಕೆಯ ಪ್ರದರ್ಶನ ಒಂದನ್ನು ವೀಕ್ಷಿಸಿದ ಪಂ|| ಜವಹರ್ ಲಾಲ್ ನೆಹರೂ ಶಾಂತಾರ ನೃತ್ಯವನ್ನು ನೋಡಿದ ಮೇಲೆಯೇ ಭರತನಾಟ್ಯ ಎಂತಹ “ಅದ್ಭುತ ಕಲೆ ಎಂಬುದರ ಅರಿವಾದದ್ದು” ಎಂದು ಹೇಳಿದ್ದಾರೆ. ಅವರ ಶೈಲಿಯ ವೈಶಿಷ್ಟ್ಯವೆಂದರೆ ಆಕರ್ಷಕ ಆಂಗಿಕಗಳು, ಅಪರೂಪವಾದ ಜತಿಗಳ ಜೋಡಣೆ, ನವಿರಾದ ನಡೆ ಮತ್ತು ಬೆಡಗಿನ ಸ್ಥಾನಕಗಳು. ಒಂದೇ ಕೊರತೆ ಎಂದರೆ, ಆಕೆ ತನ್ನ ವಿದ್ಯೆಯನ್ನು ಅನ್ಯರಿಗೆ ಕಲಿಸದೇ, ಅಂತಹ ಭವ್ಯ ಪರಂಪರೆ ಮುಂದುವರೆಯಲು ನೆರವಾಗದ ಹಠ! ಕಾರಣ ಕಲಿಯಲು ಬೇಕಾದ ನಿವೇದನೆ ಇಲ್ಲ ಎಂಬುದು !

ಭರತನಾಟ್ಯ, ಕಥಕ್ಕಳಿ ನೃತ್ಯಪಟುವಿಗೆ ಆಕೆಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಬಂದಿದೆ. ಕೇಂದ್ರ ಮತ್ತು ರಾಜ್ಯ ನೃತ್ಯ ಅಕಾಡೆಮಿಗಳ ಪ್ರಶಸ್ತಿ ನೀಡಿ ಗೌರವಿಸಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಲ್ಲದೆ. ಕರ್ನಾಟಕ ಸರಕಾರದ ಪ್ರತಿಷ್ಠಿತ ಶಾಂತಲಾ ನಾಟ್ಯ ಪ್ರಶಸ್ತಿ (2002)ಯೂ ಲಭಿಸಿದೆ.	
							
(ಎಸ್.ಎನ್.ಚಂದ್ರಶೇಖರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ